ಓಟ್: ಗ್ರಾಮಿನಿ ಅಥವಾ ಪೋಯೇಸಿ ಕುಟುಂಬದ ಒಂದು ಧಾನ್ಯಸಸ್ಯ; ಶಾಸ್ತ್ರೀಯ ನಾಮ ಅವಿನ. ಓಟ್ಸ್‌ ಎಂದೂ ಕರೆಯುವುದುಂಟು. ಮುಖ್ಯವಾಗಿ ದನಕರುಗಳ ಮತ್ತು ಕುದುರೆಗಳ ಆಹಾರ. ಇದರ ಕಾಳುಗಳನ್ನು ಮಾನವನ ಕೆಲವು ಆಹಾರವಸ್ತುಗಳ ತಯಾರಿಕೆಯಲ್ಲೂ ಬಳಸಲಾಗುತ್ತಿದೆ. ಪ್ರಪಂಚದ ಪ್ರಧಾನ ಧಾನ್ಯಸಸ್ಯಗಳಲ್ಲಿ ಓಟ್ಸ್‌ಗೆ ನಾಲ್ಕನೆಯ ಸ್ಥಾನ. (ಗೋದಿ, ಬತ್ತ, ಮುಸುಕಿನ ಜೋಳ ಮೊದಲಿನ ಮೂರು). ಓಟ್ ಸಸ್ಯ ಪಶ್ಚಿಮ ಯುರೋಪಿನ ಮೂಲನಿವಾಸಿಯಾಗಿದ್ದು ಕ್ರಮೇಣ ಸಮಶೀತೋಷ್ಣವಲಯದ ಅನೇಕ ದೇಶಗಳಿಗೆ ಹರಡಿಕೊಂಡಿದೆ. ಇಂದು ಭಾರತ, ದಕ್ಷಿಣ ಆಫ್ರಿಕ, ಮೆಕ್ಸಿಕೋ ಮುಂತಾದ ಉಷ್ಣದೇಶಗಳಲ್ಲೂ ಬೆಳೆಯುತ್ತಿದೆ. ಓಟ್ಸಿನ ವ್ಯವಸಾಯ ಬಹು ಪುರಾತನವಾದುದೆಂದು ಹೇಳುತ್ತಾರೆ. ಒಂದಾನೊಂದು ಕಾಲದಲ್ಲಿ ಹೊಲಗಳಲ್ಲಿ ಕಳೆಯ ರೂಪದಲ್ಲಿ ಓಟ್ ಸಸ್ಯ ಬೆಳೆಯುತ್ತಿತ್ತೆಂದೂ ಕ್ರಮೇಣ ಇದರ ಕಾಳುಗಳ ಉಪಯುಕ್ತತೆಯನ್ನು ಕಂಡುಕೊಂಡ ಮಾನವ ಇದರ ಕೃಷಿಯನ್ನು ಕೈಗೊಂಡನೆಂದೂ ಭಾವಿಸಲಾಗಿದೆ.
ಕಂಚಿನ ಯುಗದಲ್ಲಿ (ಪ್ರ.ಶ.ಪು. 1500-500) ಇದರ ಕೃಷಿ ರೂಢಿಯಲ್ಲಿತ್ತೆಂದು ತಿಳಿದುಬಂದಿದೆ.

ಓಟ್ ಜಾತಿಯಲ್ಲಿ ಸು. 70 ಪ್ರಭೇದಗಳಿವೆ-ಅವಿನ ಸೇಟಿವ (ಸಾಮಾನ್ಯ ಓಟ್), ಅ.ಬಿeóÁಂಟಿನ (ಕೆಂಪು ಓಟ್), ಅ.ಓರಿಯಂಟ್ಯಾಲಿಸ್, ಅ.ನ್ಯಡ, ಅ.ಬಾರ್ಬೇಟ, ಅ.ಘ್ಯಾಟ್ಯುವ, ಅ.ಸ್ಟೆರಿಲಿಸ್, ಅ.ಪ್ರೆಟೆನ್ಸಿಸ್ ಮತ್ತು ಅ.ಬ್ರೆವಿಸ್ ಪ್ರಭೇದಗಳು ಮುಖ್ಯವಾದುವು. ಇವುಗಳಲ್ಲಿ ಕೆಲವು ಚಳಿದೇಶಗಳಲ್ಲಿ ಚೆನ್ನಾಗಿ ಬೆಳೆದರೆ ಇನ್ನು ಕೆಲವು ಉಷ್ಣದೇಶಗಳಿಗೆ ಹೊಂದಿಕೊಂಡಿವೆ. ಕಾಳುಗಳಿಗಾಗಿ ಕೃಷಿಯಲ್ಲಿರುವವು ಸಾಮಾನ್ಯ ಓಟ್ ಮತ್ತು ಕೆಂಪು ಓಟ್. ಉಳಿದವನ್ನು ದನಕರುಗಳ ಮೇವಿಗಾಗಿ ಮಾತ್ರ ಬೆಳೆಸಲಾಗುತ್ತದೆ. ಇವಲ್ಲದೆ ಪ್ರಪಂಚದ ಬೇರೆ ಬೇರೆ ಪ್ರದೇಶಗಳ ವಾತಾವರಣಕ್ಕೆ ಹಾಗೂ ತನ್ನ ಬಳಕೆಗೆ ಹೊಂದಿಕೊಳ್ಳುವಂತೆ ತಳೀಕರಣ ಪ್ರಯೋಗಗಳಿಂದ ಮಾನವ ಬೆಳಕಿಗೆ ತಂದಿರುವ ಹಲವಾರು ಹೊಸ ತಳಿಗಳೂ ಇವೆ.

ಒಂದು ಕಾಲದಲ್ಲಿ ಪ್ರಪಂಚದ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದ್ದ ಓಟ್ ಸಸ್ಯ ತನ್ನ ಉಪಯುಕ್ತತೆ ಹಾಗೂ ತ್ರಾಣದಿಂದಾಗಿ ಬಹು ಜನಪ್ರಿಯವಾಗಿದೆ. ಆದ್ದರಿಂದ ಇಂದು ವಿಶ್ವದ ಎಲ್ಲ ಭಾಗಗಳಲ್ಲಿಯೂ ಇದರ ಕೃಷಿಯನ್ನ ಕಾಣಬಹುದು. ಅಮೆರಿಕ ಸಂಯುಕ್ತಸಂಸ್ಥಾನದ ದಕ್ಷಿಣಭಾಗ, ಮೆಡಿಟರೇನಿಯನ್ ಪ್ರದೇಶ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯ ಮತ್ತು ಭಾರತಗಳಲ್ಲಿ ಕೆಂಪು ಓಟನ್ನು ಪ್ರಧಾನವಾಗಿ ಬೆಳೆಸುತ್ತಾರೆ.  ಹಳದಿ ಓಟ್ಸ್‌ ಎಂಬ ತಳಿಯ ಕೃಷಿ ರಷ್ಯದ ನೈಋತ್ಯ ಪ್ರದೇಶಗಳಲ್ಲಿ, ಕೊಂಚಮಟ್ಟಿಗೆ ಅಮೆರಿಕದ ಸಂಯುಕ್ತಸಂಸ್ಥಾನದಲ್ಲಿ ವ್ಯಾಪಿಸಿದೆ. ಸಾಮಾನ್ಯ ಓಟ್ಸ (ಅ.ಸೇಟಿವ) ಯುರೋಪಿಗೆ ವಿಶಿಷ್ಟವಾದ ಬಗೆ. ಭಾರತದಲ್ಲಿ ಈ ಪ್ರಭೇದವನ್ನು ಮೇವಿಗಾಗಿ ಮಾತ್ರ ಬೆಳೆಸುತ್ತಾರೆ. ಟಿಬೆಟ್, ತುರ್ಕಿ ಮತ್ತು ಚೀನದೇಶಗಳಲ್ಲಿ ಅ.ನ್ಯೂಡ ಎಂಬ ನಗ್ನಕಾಳುಗಳ ಪ್ರಭೇದ ಬೆಳೆಯುತ್ತದೆ. ಭಾರತದಲ್ಲಿ ತಂಪು ಹವೆಯುಳ್ಳ ಬೆಟ್ಟದ ಪ್ರದೇಶಗಳಾದ ಪಶ್ಚಿಮ ಹಿಮಾಲಯ, ಕುಮಾಂವ್, ಪಂಜಾಬ್, ಸಿಮ್ಲ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಓಟ್ಸನ್ನು ಬೆಳೆಸುತ್ತಾರೆ.
ಓಟ್ ಸಸ್ಯದ ಜುಟ್ಟಿನ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಸಾಮಾನ್ಯ ಬಗೆಯ ಅ.ಸೇಟಿವ ಪ್ರಭೇದ ಕಾಡು ಬಗೆಯ ಅ.ಫ್ಯಾಟ್ಯುವದಿಂದ ಜನ್ಮತಾಳಿತೆಂದೂ ಕೆಂಪು ಓಟ್ಸ್‌ (ಅ.ಬಿeóÁಂಟಿನ) ಅ.ಸ್ಟೆರಿಲಿಸ್ ಪ್ರಭೇದದಿಂದ ಬಂದುದೆಂದೂ ಕೆಲವರ ಅಭಿಮತ. ಆದರೆ ಅ.ಸೆರಿಲಿಸ್ ಪ್ರಭೇದ ಇಂದಿನ ಎಲ್ಲ ಮುಖ್ಯವಾದ ಓಟ್ ಸಸ್ಯಗಳಿಗೆ ಮೂಲವೆಂದು ಕಾಫ್ಮನ್ ಎಂಬ ವಿಜ್ಞಾನಿ ತಳಿವಿಜ್ಞಾನ ಮತ್ತು ಸಸ್ಯರೋಗವಿಜ್ಞಾನಗಳ ಆಧಾರದ ಮೇಲೆ ಹೇಳುತ್ತಾನೆ.

 ಸಸ್ಯ ವಿವರಣೆ 
ಓಟ್ ಸಸ್ಯ ಒಂದು ವಾರ್ಷಿಕ ಹುಲ್ಲು. 2'-5' ಎತ್ತರಕ್ಕೆ ಬೆಳೆಯುತ್ತದೆ. ಬೇರುಗಳು ಇತರ ಏಕದಳ ಸಸ್ಯಗಳಲ್ಲಿರುವಂತೆ ತೊಡುಕು ಬೇರಿನ ರೂಪದಲ್ಲಿವೆ. ಕಿರಿ, ತೆಳು ಮತ್ತು ಉದ್ದ ಎಲೆಗಳು. ಕಾಡದಲ್ಲಿ ಗಿಣ್ಣಗಳೂ ಟೊಳ್ಳಾದ ಅಂತರ ಗಿಣ್ಣಗಳೂ ಇವೆ. ಹೂಗೊಂಚಲು ಸಂಕೀರ್ಣ ಪುಷ್ಪಗುಚ್ಛದ (ಪ್ಯಾನಿಕಲ್) ಮಾದರಿಯದು. ಕೆಲವು ಪ್ರಭೇದಗಳಲ್ಲಿ ಕದಿರುಗೊಂಚಲಿನ (ಸ್ಪೈಕ್) ಅಥವಾ ಚೆಂಡಿನ ರೀತಿಯದಾಗಿರಬಹುದು. ಹೂಗೊಂಚಲುಗಳು ಎಲ್ಲ ಕಡೆಗೂ ಒಂದೇ ಸಮನಾಗಿ ಕವಲೊಡೆದು ಹರಡಿಕೊಂಡು ಸಮರೂಪವನ್ನು ಹೊಂದಿರಬಹುದು ಅಥವಾ ಒಂದೇ ಕಡೆ ಕವಲೊಡೆದು ಬಾಗಿಕೊಂಡು ಅಸಮರೂಪವನ್ನು ಹೊಂದಿರಬಹುದು. ಹೂಗೊಂಚಲಿನಲ್ಲಿ ಅನೇಕ ಕವಲುಗಳು ಮತ್ತು ಎರಡೆರಡು ಪುಟ್ಟ ಹೂಗಳನ್ನೊಳಗೊಂಡ ಹಲವಾರು ಅನುಶೂಕಿಗಳು (ಸ್ಪೈಕ್ಲೆಟ್ಸ್‌) ಇವೆ. ಹೂವಿನಲ್ಲಿ ಮೂರು ಕೇಸರಗಳ ಒಂದು ಅಂಡಕೋಶವೂ ಇವೆ. ಅವನ್ನು ಲೆಮ್ಮ ಮತ್ತು ಪೇಲಿಯ ಎಂಬ ಆವರಣಗಳು ಮುಚ್ಚಿಕೊಂಡಿವೆ. ಗರ್ಭಕಟ್ಟಿದ ಅಂಡಕೋಶ ಒಂದೇ ಒಂದು ಬೀಜವನ್ನುಳ್ಳ ಕ್ಯಾರಿಯೋಪ್ಸಿಸ್ ಎಂಬ ಧಾನ್ಯವಾಗುತ್ತದೆ. ಧಾನ್ಯಕ್ಕೆ ಗ್ರೋಟ್ ಎಂಬ ಹೆಸರೂ ಇದೆ. ಇದನ್ನು ಹುಸುಕು ಮುಚ್ಚಿಕೊಂಡಿರುತ್ತದೆ. ಹುಸುಕು ಬೇರೆಬೇರೆ ಪ್ರಭೇದಗಳಲ್ಲಿ ಬೇರೆಬೇರೆ ಬಣ್ಣದ್ದು. ಇದರ ಕಾರಣದಿಂದ ಅವುಗಳಿಗೆ ಹಳದಿ ಓಟ್ಸ್‌, ಬಿಳಿ ಓಟ್ಸ್‌, ಕೆಂಪು ಓಟ್ಸ್‌, ಕಪ್ಪು ಓಟ್ಸ್‌ ಮುಂತಾದ ಹೆಸರುಗಳು ಬಂದಿವೆ. ಕೆಲವು ಪ್ರಭೇದಗಳಲ್ಲಿ ಧಾನ್ಯ ಹುಸುಕಿಲ್ಲದೆ ನಗ್ನಫಲದ ರೂಪದಲ್ಲಿರುವುದೂ ಉಂಟು. ಉದಾಹರಣೆಗೆ ಅ.ನ್ಯೂಡ ಪ್ರಭೇದ.
ಓಟ್ ಸಸ್ಯದಲ್ಲಿ ಸ್ವಾಭಾವಿಕವಾಗಿ ಸ್ವಪರಾಗಸ್ಪರ್ಶಕ್ರಿಯೆಯೇ ನಡೆಯುತ್ತದೆ. ಅನ್ಯಪರಾಗಸ್ಪರ್ಶಕ್ರಿಯೆ ಬಹಳ ವಿರಳ.
ವರ್ಗೀಕರಣ: ಗೋದಿಯಲ್ಲಿರುವಂತೆ ಆವಿನ ಜಾತಿಯಲ್ಲಿ ಬಹುಗುಣಿತ ಸಂಖ್ಯೆಯ ಕ್ರೋಮೊಸೋಮುಗಳನ್ನುಳ್ಳ ಪ್ರಭೇದಗಳು ಇವೆ. ಜನನ ಕಣಗಳಲ್ಲಿ ಏಕಗುಣಿತ (ಟಿ) ಕ್ರೋಮೊಸೋಮುಗಳ ಸಂಖ್ಯೆ 7, 14 ಮತ್ತು 21 ಹಾಗೂ ಸಸ್ಯಾಂಗ ಕಣಗಳಲ್ಲಿ ದ್ವಿಗುಣಿತ (2ಟಿ) ಕ್ರೋಮೊಸೋಮುಗಳ ಸಂಖ್ಯೆ 14, 28 ಮತ್ತು 42 ಇರುತ್ತವೆ. ಈ ಮೂರು ಪ್ರಭೇದಗಳು ಅನುಗುಣವಾಗಿ ದ್ವಿಗುಣಿತ (ಡಿಪ್ಲಾಯ್ಡ್‌), ಚತುರ್ಗುಣಿತ (ಟೆಟ್ರಾಪ್ಲಾಯ್ಡ್‌) ಮತ್ತು ಷಡ್ಗುಣಿತ (ಹೆಕ್ಸಾಪ್ಲಾಯ್ಡ್‌) ಪ್ರಭೇದಗಳೆನಿಸಿವೆ. ವ್ಯವಸಾಯದಲ್ಲಿರುವ ಓಟ್ ಸಸ್ಯಗಳು ಷಡ್ಗುಣಿತ ಪ್ರಭೇದಕ್ಕೆ ಸೇರಿವೆ.
ವ್ಯವಸಾಯ: ಓಟ್ ಸಸ್ಯ ಇತರ ಧಾನ್ಯ ಸಸ್ಯಗಳಂತಲ್ಲದೆ ಎಂಥ ಮಣ್ಣಿನಲ್ಲಿಯಾದರೂ ಚೆನ್ನಾಗಿ ಬೆಳೆಯಬಲ್ಲುದು. ಭೂಮಿ ಕೊಂಚ ಫಲವತ್ತಾಗಿದ್ದು ಬೆಳೆವಣಿಗೆಯ ಕಾಲದಲ್ಲಿ ಸಾಕಷ್ಟು ತೇವವಿದ್ದರೆ ಒಳ್ಳೆಯ ಫಸಲು ಕೊಡುತ್ತದೆ. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಓಟ್ಸಿನ ತಳಿಗೆ ಅನುಗುಣವಾಗಿ ವಸಂತ ಋತುವಿನಲ್ಲೋ ಚಳಿಗಾಲದಲ್ಲೋ ಬಿತ್ತನೆ ಮಾಡುತ್ತಾರೆ. ಭಾರತದಲ್ಲಿ ಬಿತ್ತನೆಯ ಕಾಲ ಅಕ್ಟೋಬರ್-ನವೆಂಬರ್ ತಿಂಗಳುಗಳು. ಎಕರೆಗೆ ಸುಮಾರು 30-45 ಕಿಗ್ರಾಂ ಬೀಜ ಬೇಕು. ಸ್ವಾಭಾವಿಕ ಗೊಬ್ಬರವನ್ನಾಗಲಿ, ರಾಸಾಯನಿಕ ಗೊಬ್ಬರವನ್ನಾಗಲಿ ಹಾಕಿದರೆ ಒಳ್ಳೆಯ ಫಸಲು ಪಡೆಯಬಹುದು. ನೆಲದ ಗುಣದ ಮೇಲೆ ಗೊಬ್ಬರದ ಆವಶ್ಯಕತೆ, ಪ್ರಮಾಣವನ್ನು ನಿರ್ಧರಿಸಬೇಕು. ಬೇಕಾದ ಪ್ರಮಾಣಕ್ಕಿಂತ ಹೆಚ್ಚು ಗೊಬ್ಬರ ಹಾಕಿದರೆ ಗಿಡಗಳು ಹೆಚ್ಚು ಎತ್ತರ ಬೆಳೆದು ನೆಟ್ಟಿಗೆ ನಿಲ್ಲಲಾಗದೆ ಒರಗಿಬಿಡಬಹುದು. ಆದರೂ ಹಸಿರು ಗೊಬ್ಬರದೊಂದಿಗೆ ಕೊಂಚ ಸೂಪರ್ ಫಾಸ್ಫೇಟನ್ನು ಮಿಶ್ರಮಾಡಿ ಉಪಯೋಗಿಸುವುದು ಒಳ್ಳೆಯದು. ಬಿತ್ತಿದ 3-4 ತಿಂಗಳುಗಳಲ್ಲಿ ಪೈರು ಕೊಯ್ಲಿಗೆ ಸಿದ್ಧವಾಗುತ್ತದೆ. ಧಾನ್ಯದ ಸರಾಸರಿ ಇಳುವರಿ ಅಮೆರಿಕದಲ್ಲಿ ಎಕರೆಗೆ 31 ಬುಷೆಲುಗಳು. ಪರಿಸ್ಥಿತಿ ಅನುಕೂಲವಿರುವ ಡೆನ್ಮಾರ್ಕ್, ಸ್ವೀಡನ್ ಮುಂತಾದೆಡೆಗಳಲ್ಲಿ ಎಕರೆಗೆ 71 ಬುಷೆಲ್ಗಳವರೆಗೂ ಇಳುವರಿಯಿದೆ. ಭಾರತದಲ್ಲಿ ಎಕರೆಗೆ 130-230 ಕಿಗ್ರಾಂ ಹುಲ್ಲಿನ ಉತ್ಪನ್ನವಿದೆ. ಭಾರತದಲ್ಲಿ ಕೆಲವು ಕಡೆ ಬರಿ ಮೇವಿಗಾಗಿ ಓಟನ್ನು ಬೆಳೆಸುತ್ತಾರೆ. ಅಂಥಲ್ಲಿ ಮೇವನ್ನು ಎರಡು ಮೂರು ಬಾರಿ ಕಟಾವು ಮಾಡುವುದುಂಟು. ಆಗ ಮೊದಲನೆಯ ಕಟಾವಿನಲ್ಲಿ ಸು. 3800 ಕಿಗ್ರಾಂ ಮತ್ತು 2ನೆಯ ಕಟಾವಿನಲ್ಲಿ ಸು.1300 ಕಿಗ್ರಾಂ ಹುಲ್ಲನ್ನು ಪಡೆಯಬಹುದು.

ಸಾಮಾನ್ಯವಾಗಿ ಓಟ್ಸನ್ನು ಪರ್ಯಾಯ ಬೆಳೆಯಾಗಿ ವ್ಯವಸಾಯ ಮಾಡುವುದೇ ವಾಡಿಕೆ. ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಮುಸುಕಿನಜೋಳ, ಹತ್ತಿ, ಸೋಯಾ ಬೀನ್ಸ್‌ ಅಥವಾ ಯಾವುದಾದರೂ ದ್ವಿದಳ ಸಸ್ಯದೊಂದಿಗೆ ಪರ್ಯಾಯ ಬೆಳೆಯನ್ನಾಗಿ ಬೆಳೆಸುತ್ತಾರೆ.
ರಾಸಾಯನಿಕ ಸಂಯೋಜನೆ ಮತ್ತು ಉಪಯೋಗ: ಓಟ್ಸ್‌ ತುಂಬ ಪುಷ್ಟಿದಾಯಕ ಅಹಾರವೆಂದು ಹೆಸರಾಗಿದೆ. ಇದರಲ್ಲಿ ಪ್ರೋಟೀನು, ಕೊಬ್ಬು ಹಾಗೂ ಬಿ ಮತ್ತು ಇ ಜೀವಾತುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಓಟ್ ಹಿಟ್ಟಿನ ರಾಸಾಯನಿಕ ಸಂಯೋಜನೆ ಹೀಗಿದೆ : ಪ್ರತಿ 100 ಗ್ರಾಮಿಗೆ ತೇವಾಂಶ 8, ಪ್ರೋಟೀನು 14, ಕೊಬ್ಬು 7, ಕಾರ್ಬೊಹೈಡ್ರೇಟುಗಳು 68, ನಾರಿನ ಅಂಶ 1, ಬೂದಿಯ ಅಂಶ 1.7. ಬಿ ಜೀವಾತು 285-975 ಗ್ರಾಂ. ಬಿ ಜೀವಾತುಗಳಲ್ಲಿ ಬಿ1 ರಿಬೊಫ್ಲೇವಿನ್, ನಯಾಸಿನ್, ಕೋಲಿನ್ ಮತ್ತು ಪ್ಯಾಟೊಥಿನಿಕ್ ಆಮ್ಲ ಮುಖ್ಯವಾದುವು. ಸಿ ಮತ್ತು ಡಿ ಜೀವಾತುಗಳಿಲ್ಲ. ಇದ್ದರೂ ಅತ್ಯಂತ ಕಡಿಮೆ ಪ್ರಮಾಣದಲ್ಲಿವೆ.

ಓಟ್ಸನ್ನು ಹಸಿ ಹುಲ್ಲಿನ ರೂಪದಲ್ಲಾಗಲಿ ಒಣಗಿಸಿದ ಹುಲ್ಲಿನ ರೂಪದಲ್ಲಾಗಲಿ ದನಕರುಗಳ ಮೇವಾಗಿ ಉಪಯೋಗಿಸುತ್ತಾರೆ. ಅತ್ಯಂತ ಶ್ರೇಷ್ಠ ದರ್ಜೆಯದೆಂದು ಹೆಸರಾಗಿರುವ ಇದರ ಉತ್ಪನ್ನದ ಬಹುಭಾಗ ಮೇವಾಗಿಯೇ ವಿನಿಯೋಗವಾಗುವುದು. ಕಾಳುಗಳಂತೂ ಕುದುರೆಗಳಿಗೆ ಬಹಳ ಒಳ್ಳೆಯ ಮತ್ತು ಪ್ರಿಯವಾದ ತಿನಿಸು. ಕಾಳು ಮತ್ತು ಹುಸುಕು ಎರಡನ್ನೂ ಸಾಕುಪ್ರಾಣಿಗಳ ಮಿಶ್ರ ಆಹಾರವಾಗಿ (ಭೂಸ) ಬಳಸುತ್ತಾರೆ. ಕಾಳಿನಲ್ಲಿ ಅಧಿಕವಾಗಿ ಪೌಷ್ಟಿಕಾಂಶಗಳಿರುವುದರಿಂದ ಇದು ಮಾನವನ ಆಹಾರವಾಗಿಯೂ ಉಪಯೋಗವಾಗುವುದುಂಟು. ಬೆಳಗಿನ ಉಪಾಹಾರಕ್ಕಂತೂ ಇದು ಬಹಳ ಒಳ್ಳೆಯದು. ಓಟ್ ಹಿಟ್ಟಿನಿಂದ ಗಂಜಿ (ಪಾರಿಜ್), ಕುಕಿಸ್ (ಒಂದು ಬಗೆಯ ಸಣ್ಣ ರೊಟ್ಟಿ) ಮತ್ತು ಕಡುಬು (ಪುಡ್ಡಿಂಗ್) ಮಾಡುತ್ತಾರೆ. ಆದರೆ ಬ್ರೆಡ್ ಮಾಡುವುದಕ್ಕೆ ಆಗುವುದಿಲ್ಲ. ಬ್ರೆಡ್ ತಯಾರಿಸಲು ಸಹಕಾರಿಯಾಗುವಂಥ ಗ್ಲೊಟೆನ್ ಎಂಬ ಪ್ರೋಟೀನು ಅದರಲ್ಲಿ ಇಲ್ಲದಿರುವುದೇ ಇದರ ಕಾರಣ. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ವರ್ಷಕ್ಕೆ ಸುಮಾರು 42 ದಶಲಕ್ಷ ಬುಷೆಲ್ ಓಟ್ಸನ್ನು ಉಪಾಹಾರ ತಯಾರಿಕೆಯಲ್ಲಿ ಬಳಸುತ್ತಾರೆಂದು ಅಂದಾಜು. ಓಟ್ ಹುಸುಕಿನಲ್ಲಿ ಸೆಲ್ಯೂಲೋಸ್, ಲಿಗ್ನಿನ್, ಪೆಂಟೊಸನ್ ಮುಂತಾದ ಕಾರ್ಬೊಹೈಡ್ರೇಟುಗಳು ಹೆಚ್ಚಾಗಿವೆ. ಇವನ್ನು ಸಲ್ಫ್ಯೂರಿಕ್ ಆಮ್ಲದೊಂದಿಗೆ ಸೇರಿಸಿ ಆವಿಯ ಒತ್ತಡದಲ್ಲಿ ಕುದಿಸಿ ಬಟ್ಟಿಯಿಳಿಸಿ ಫರ್ಫರಾಲ್ ಎಂಬ ಸಂಯುಕ್ತವನ್ನು ತಯಾರಿಸುತ್ತಾರೆ. ಕೃತಕ ರಾಳ (ರೆಸಿನ್), ಕೈಗಾರಿಕೆಗಳಲ್ಲಿ ಬಳಸಲಾಗುವ ವಿಲಯಕಗಳು, ನೈಲಾನ್ ತಯಾರಿಕೆಗೆ ಬೇಕಾಗುವ ಅಡಿಪೊನೈಟ್ರಿಲ್ ಸಂಯುಕ್ತ ಇವುಗಳ ತಯಾರಿಕೆಯಲ್ಲಿ ಫರ್ಫರಾಲಿನ ಉಪಯೋಗ ಉಂಟು, ಆಸ್ಫ್ರಾಲ್ಬಿನೊಂದಿಗೆ ಫರಫರಾಲನ್ನು ಸೇರಿಸಿ ಅದರ ಅಂಟುವಿಕೆ ಹೆಚ್ಚಾಗುವಂತೆ ಮಾಡುತ್ತಾರೆ.  

 ರೋಗಗಳು 
ಓಟ್ ಸಸ್ಯಕ್ಕೆ ಹಲವಾರು ಬಗೆಯ ಬೂಷ್ಟು ರೋಗಗಳೂ ತಗಲುತ್ತವೆ. ಇವುಗಳಲ್ಲಿ ಯುಸ್ಟಿಲಾಗೋ ಜಾತಿಯ ಬೂಷ್ಟಿನಿಂದ ಬರುವ ಕಾಡಿಗೆ (ಸ್ಮಟ್) ರೋಗ ಮತ್ತು ಪಕ್ಸೀನಿಯಾ ಜಾತಿಯ ಬೂಷ್ಟಿನಿಂದ ಬರುವ ಅರಿಸಿನ (ರಸ್ಟ್‌) ರೋಗ ಮುಖ್ಯವಾದುವು. ಕಾಡಿಗೆ ರೋಗಗಳಲ್ಲಿ ಲೂಸ್ó ಸ್ಮಟ್ ಮತ್ತು ಕವರ್ಡ್ ಸ್ಮಟ್ ಮುಂತಾದ ಬಗೆಗಳಿವೆ. ಈ ರೋಗ ಬಂದ ಓಟ್ಸಿನಲ್ಲಿ ಕಾಳುಗಳೆಲ್ಲ ಪೌಷ್ಟಿಕಾಹಾರವಿಲ್ಲದೆ ಬೂಷ್ಟಿನ ಬೀಜಕಣಗಳಿಂದ ತುಂಬಿ ಕಪ್ಪಾಗುತ್ತವೆ. ಇವನ್ನು ನಿವಾರಿಸಲು ಸೆರೆಸಾನ್-ಎಂ, ಅಗ್ರಾಕ್ಸ್‌, ಪ್ಯಾನೊಜೆನ್ ಮುಂತಾದ ಔಷಧಿಗಳನ್ನು ಚಿಮುಕಿಸುತ್ತಾರೆ. ಅಲ್ಲದೆ ಕಾಡಿಗೆ ರೋಗನಿರೋಧಕ ಓಟ್ ತಳಿಗಳನ್ನು ಅಭಿವೃದ್ಧಿಪಡಿಸಿ ಬೆಳಯುವುದರಿಂದಲೂ ತಡೆಗಟ್ಟಬಹುದು. ಅರಿಸಿನ ರೋಗದಲ್ಲಿಯ ಕ್ರೌನ್ ರಸ್ಟ್‌, ಸ್ಟೆಮ್ ರಸ್ಟ್‌ ಮುಂತಾದ ವಿವಿಧ ಬಗೆಗಳಿವೆ. ಎಲೆ, ಕಾಂಡ ಮತ್ತು ಹೂಗೊಂಚಲುಗಳ ಮೇಲೆಲ್ಲ ಕಗ್ಗೆಂಪು ಅಥವಾ ಕಿತ್ತಳೆ ಬಣ್ಣದ ಬೊಕ್ಕೆಗಳೇಳುವುದು ಅರಿಸಿನ ರೋಗದ ಮುಖ್ಯ ಚಿಹ್ನೆಗಳು. ಈ ರೋಗ ನಿವಾರಣೆಗೆ ಯಾವ ರಾಸಾಯನಿಕವೂ ಇಲ್ಲ. ತಳೀಕರಣ ಪ್ರಯೋಗಗಳಿಂದ ಅಭಿವೃದ್ಧಿ ಪಡಿಸಿದ ಹೊಸ ರೋಗನಿರೋಧಕ ತಳಿಗಳನ್ನು ವ್ಯವಸಾಯ ಮಾಡುವುದೊಂದೇ ಅರಿಸಿನ ರೋಗವನ್ನು ತಡೆಗಟ್ಟಲು ಇರುವ ಮಾರ್ಗ. ಇವೆರಡು ರೋಗಗಳಲ್ಲದೆ ಇನ್ನೂ ಕೆಲವು ಬೂಷ್ಟು ರೋಗಗಳು ಓಟ್ಸಿಗೆ ಅಂಟುವುದುಂಟು. ಹೆಲ್ಮಂಥೋ ಸ್ಟೋರಿಯಮ್ ವಿಕ್ಟೋರಿಯಿ ಮತ್ತು ಹೆ.ಅವಿನಿ ಎಂಬ ಬೂಷ್ಟಿನಿಂದ ಬರುವ ವಿಕ್ಟೋರಿ ಬ್ಲೈಟ್ ರೋಗ ಮತ್ತು ಲೀಫ್ಬ್ಲಾಚ್ ರೋಗಗಳು ಇವುಗಳಲ್ಲಿ ಮುಖ್ಯವಾದುವು. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮಕ್ರಮವಾಗಿ ಕೊಳೆಯುತ್ತ ಹೋಗುವುದು, ಅವುಗಳ ಮೇಲೆ ಕಂದು ಮಚ್ಚೆಗಳು ಕಾಣಿಸಿಕೊಳ್ಳವುದು ಕಾಳುಗಳು ಚಿರಟೆ ಹೋಗುವುದು, ಎಳೆಗಳುದುರುವಿಕೆ ಮುಂತಾದುವು ಈ ರೋಗಗಳ ಮುಖ್ಯ ಲಕ್ಷಣಗಳು. ಸಣ್ಣ ಸಸಿಗಳಲ್ಲೇ ಕಾಣಿಸಿಕೊಳ್ಳುವ ಈ ರೋಗಗಳು ಬೀಜದ ಮೂಲಕ ಹರಡುತ್ತವೆ. ಆದ್ದರಿಂದ ಬೀಜ ಬಿತ್ತುವುದಕ್ಕೆ ಮುನ್ನ ಜೈವಿಕ-ಪಾದರಸ ಸಂಯಕ್ತಗಳಿಂದ ಬೀಜಗಳನ್ನು ತೊಳೆಯುವುದರಿಂದ ಇವನ್ನು ತಡೆಗಟ್ಟಬಹುದು.
ಕೆಲವು ಬಾರಿ ಓಟ್ ಸಸ್ಯಕ್ಕೆ ಕೀಟಗಳೂ ಅಂಟುತ್ತವೆ. ಆಸಿನೆಲ್ಲ ಫ್ರಿಟ್ ಎಂಬ ಒಂದು ಬಗೆಯ ಫಲಮಕ್ಷಿಕ ಮತ್ತು ಟಾಕ್ಸಾಪ್ಟೆರ ಗ್ರಾಮಿನಮ್ ಎಂಬ ಹಸಿರು ತಿಗಣೆ ಮುಖ್ಯವಾದುವು. ಪ್ಯಾರಾಥಿಯಾನ್, ಟೆಟ್ರಿ ಈಥೈಲ್ ಪೈರೊಫಾಸ್ಫೇಟ್, ಆಲ್ಡ್ರಿನ್, ಟಾಕ್ಸಾಫೀನ್ ಮುಂತಾದ ಕೀಟನಿವಾರಕ ಔಷಧಿಗಳನ್ನು ಚಿಮುಕಿಸುವುದರಿಂದ ಇವನ್ನು ಹತೋಟಿಯಲ್ಲಿಡಬಹುದು. ಓಟ್ಸನ್ನು ಸಾಮಾನ್ಯವಾಗಿ ಬಿತ್ತುವುದಕ್ಕಿಂತ ಸ್ವಲ್ಪ ಮುಂಚಿತವಾಗಿಯೇ ಬಿತ್ತುವುದರಿಂದಲೂ ಇವನ್ನು ತಡೆಗಟ್ಟಬಹುದು.	(ಎ.ಎಮ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ